ಎಲೆಕ್ಟ್ರೊ ಎನ್ಸೆಫಲೋಗ್ರಫಿ: ಮಿದುಳಿನ ವಿದ್ಯುತ್ಸಂಬಂಧ ಚಟುವಟಿಕೆಗಳನ್ನು ಲೇಖಿಸುವ ಮತ್ತು ಅವನ್ನು ಅರ್ಥವಿಸುವ ತಂತ್ರ (ಮಿದುಳಿನ ವಿದ್ಯುಲ್ಲೇಖನ). ಈ ತಂತ್ರದಲ್ಲಿ ಉಪಯೋಗಿಸುವ ಯಂತ್ರದ ಹೆಸರು ಎಲೆಕ್ಟ್ರೊ ಎನ್ಸೆಫಲೋಗ್ರಾಫ್ (ಮಿದುಳಿನ ವಿದ್ಯುಲ್ಲೇಖ).

ಪ್ರಾಣಿಗಳ ಜೀವಕ್ರಿಯೆಗಳೆಲ್ಲವುಗಳ ಹಿಂದೆಯೂ ಒಂದಲ್ಲ ಒಂದು ವಿಧವಾದ ವಿದ್ಯುತ್ರ್ಕಿಯೆ ಇದೆ ಎಂಬುದನ್ನು ಕೇಟನ್ ಮೊತ್ತಮೊದಲು ಸ್ಥೂಲವಾಗಿ ತೋರಿಸಿದ (1874). ಮುಂದೆ 1890ರಲ್ಲಿ ಬೆಕ್ ಎಂಬಾತ ನಾಯಿಯ ಮಿದುಳಿನಲ್ಲಿ ಸತತವಾಗಿ ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತಿರುತ್ತದೆ, ಅಲ್ಲದೇ ಅದರ ಕಣ್ಣುಗಳಿಗೆ ಬೀಳುವ ನೋಟ ಬದಲಾದಂತೆ ಬೆಳಕಿನ ತೀಕ್ಷ್ಣತೆ ಹೆಚ್ಚು ಕಡಿಮೆಯಾದಂತೆ ಮಿದುಳಿನ ವಿದ್ಯುತ್ಕ್ರಿಯೆಯಲ್ಲಿಯೂ ಹೆಚ್ಚು ಕಡಿಮೆಗಳು ಕಂಡುಬರುತ್ತವೆಂದು ತೋರಿಸಿದ. ಆದರೆ ಪ್ರಯೋಗಗಳನ್ನು ಜರ್ಮನಿಯ ಕಾಫ್ಮನ್ 1912ರಲ್ಲಿ ಪುನಃ ಸಮರ್ಥನೆ ಮಾಡುವವರೆಗೆ ಇವು ವೈದ್ಯರ ಮತ್ತು ಇತರ ವಿಜ್ಞಾನಿಗಳ ಗಮನಕ್ಕೆ ಬಂದಂತೆ ಕಾಣುವುದಿಲ್ಲ. ಅಲ್ಲಿಂದ 12 ವರ್ಷಗಳು ಕಳೆದ ಮೇಲೆ 1924ರಲ್ಲಿ ಬರ್ಗರ್ ಎಂಬ ಮತ್ತೊಬ್ಬ ಜರ್ಮನ್ ವೈದ್ಯವಿಜ್ಞಾನಿ ಮನುಷ್ಯನ ಮಿದುಳಿನ ವಿದ್ಯುತ್ಕ್ರಿಯೆಗಳನ್ನು ನಿರೂಪಿಸುವ ಸಾಹಸದ ಕೆಲಸಕ್ಕೆ ಕೈಹಾಕಿದ. ಆರೇಳು ವರ್ಷಗಳ ಈತನ ನಿರಂತರ ಶ್ರಮದ ಪರಿಣಾಮವಾಗಿ ಮಾನವನ ಮಿದುಳಿನ ಹಲವಾರು ಚಿತ್ತಪ್ರವೃತ್ತಿಗಳನ್ನು ಪ್ರತಿಬಿಂಬಿಸುವ ನೂರಾರು ವಿದ್ಯುತ್ಕ್ರಿಯಾಚಿತ್ರ ನಿರೂಪಣೆಗಳು ಪ್ರಕಟವಾದುವು. ಆದರೆ ಈ ಚಿತ್ರನಿರೂಪಣಗಳನ್ನಾಗಲಿ ಅವುಗಳಿಂದ ಬರ್ಗರ್ ಸಾಧಿಸಿದ ತೀರ್ಮಾನಗಳನ್ನಾಗಲಿ ಆಗಿನ ವೈದ್ಯ ವಿಜ್ಞಾನಿಗಳು ವಿಶ್ವಾಸದಿಂದ ಸ್ವಾಗತಿಸಲಿಲ್ಲ. ಇದಕ್ಕೆ ಎದೆಗುಂದದೆ ಬರ್ಗರ್ ತನ್ನ ಅನ್ವೇಷಣೆಗಳನ್ನು ಮುಂದುವರಿಸಿದ. ಈತನ ಶ್ರಮಕ್ಕೆ ಮನ್ನಣೆ 1924ರಲ್ಲಿ ದೊರೆಯೆತು. 

ಆ ವರ್ಷ ಇಂಗ್ಲೆಂಡಿನ ಪ್ರಮುಖ ವೈದ್ಯವಿಜ್ಞಾನಿ ಏಡ್ರಿಯನ್ ಎಂಬಾತ ಬರ್ಗರನ ವಿದ್ಯುತ್ಕ್ರಿಯಾನಿರೂಪಣೆಗಳು ತೀರ ನಿರರ್ಥಕಗಳಲ್ಲ, ಅವುಗಳ ವ್ಯಾಸಂಗದಿಂದ ಮಾನವನ ಮಿದುಳು ರೋಗಗಳ ನಿಧಾನ, ಚಿಕಿತ್ಸೆಗಳಿಗೆ ಅಲ್ಪಸ್ವಲ್ಪ ಅನುಕೂಲವಾದೀತು, ಇಂಥ ಪ್ರಯೋಗಗಳನ್ನು ತಿರಸ್ಕರಿಸುವ ಮುನ್ನ ಅವನ್ನು ಕೂಲಂಕಷವಾಗಿ ಪರೀಕ್ಷಿಸಬೇಕಾದದ್ದು ವೈದ್ಯವಿಜ್ಞಾನಿಗಳ ಕರ್ತವ್ಯ ಎಂಬ ತನ್ನ ಅಭಿಪ್ರಾಯವನ್ನು ಪ್ರಕಟಿಸಿ ಬರ್ಗರನನ್ನು ಅಭಿನಂದಿಸಿದ, ಅಂದಿನಿಂದ ಈ ಶಾಖೆ ಹಲವು ದಿಕ್ಕುಗಳಲ್ಲಿ ಬೆಳೆಯುತ್ತ ಬಂದಿದೆ.

ಮಿದುಳು ಕೋಟ್ಯನುಕೋಟಿ ನರ್ವ್‌ಸೆಲ್ಲುಗಳ ಅಂದರೆ ನರಕೋಶಗಳ ಮತ್ತು ಆ ಅಸಂಖ್ಯಾತ ನರಕೋಶಗಳನ್ನು ಒಂದಕ್ಕೊಂದನ್ನು ಪರಸ್ಪರ ಕೂಡಿಸಿರುವ ಅಸಂಖ್ಯಾತ ನರತಂತುಗಳ ವ್ಯವಸ್ಥೆ. ಪ್ರತಿಯೊಂದು ನರಕೋಶವೂ ಒಂದು ಪುಟ್ಟ ವಿದ್ಯುತ್ಕೋಶ, ಅಂದರೆ ನಾವು ಟಾರ್ಚ್ಲೈಟಿನಲ್ಲಿ ಉಪಯೋಗಿಸುವಂಥ ಸೆಲ್. ಟಾರ್ಚ್ಲೈಟಿನ ವಿದ್ಯುತ್ಕೋಶಕ್ಕೂ ಮಿದುಳಿನ ನರಕೋಶಕ್ಕೂ ಇರುವ ವ್ಯತ್ಯಾಸ ಈ ಲೇಖನದ ದೃಷ್ಟಿಯಿಂದ ಇಷ್ಟೇ : ಟಾರ್ಚ್ಲೈಟಿನ ವಿದ್ಯುತ್ಕೋಶದ ಶಕ್ತಿ ಒಂದು ವೋಲ್ಟಿನ ಹಲವಾರು ಲಕ್ಷಾಂಶಗಳಷ್ಟು ಮಾತ್ರ. ಇನ್ನೊಂದು ವ್ಯತ್ಯಾಸವೂ ಇದೆ. ಟಾರ್ಚ್ಲೈಟಿನ ವಿದ್ಯುಚ್ಛಕ್ತಿ ಹೆಚ್ಚು ಕಡಿಮೆ ಏಕರೀತಿಯಾಗಿರುತ್ತದೆ. ನರಕೋಶದ ವಿದ್ಯುತ್ತು ಚಂಚಲ. ನರಕೋಶ ಜೀವಂತವಾಗಿರುವಷ್ಟು ಕಾಲ ಅದರ ವಿದ್ಯುತ್ತು ವಿರಾಮವಿಲ್ಲದೆ ಏರಿ ಇಳಿದು ಏರುತ್ತಿರುತ್ತದೆ.

ಈ ಏರಿಳಿತಗಳನ್ನು ಚಿತ್ರಿಸುವ ವಿಧಾನ ಹೀಗೆ. ತಿರುಪು ಹಿಡಿಗಳಿರುವ ಬೆಳ್ಳಿಯ ಎರಡು ಬಿಲ್ಲೆಗಳನ್ನು ಒಬ್ಬ ಮನುಷ್ಯನ ತಲೆಯ ಮೇಲೆ ಬಿಗಿಸಿಟ್ಟರೆ, ಆ ಬಿಲ್ಲೆಗಳ ಕೆಳಗಿರುವ ಮಿದುಳಿನ ಪ್ರಾಂತದ ನರಕೋಶಗಳು ಉತ್ಪತ್ತಿಮಾಡುವ ವಿದ್ಯುಚ್ಛಕ್ತಿ ಬಿಲ್ಲೆಗಳನ್ನು ಪ್ರವೇಶಿಸುತ್ತದೆ.

ಆದರೆ ಮೇಲೆ ತಿಳಿಸಿರುವಂತೆ ಈ ವಿದ್ಯುತ್ತು ಅತಿಕ್ಷೀಣ ಶಕ್ತಿಯದಾದ್ದರಿಂದ ಅದನ್ನು ವಿದ್ಯುದ್ವರ್ಧಕಗಳಿಂದ ವರ್ಧಿಸಬೇಕಾದದ್ದು ಅತ್ಯವಶ್ಯ. ವಿದ್ಯುದ್ವರ್ಧಕಗಳು ವಿಶೇಷ ರೀತಿಯವಾಗಿರಬೇಕು. ಏಕೆಂದರೆ ಇವುಗಳ ವರ್ಧಕ ಸಾಮಥರ್ಯ್‌ ಹತ್ತಿಪ್ಪತ್ತು ಲಕ್ಷಗಳಷ್ಟಾದರೂ ಇರಬೇಕಾಗುತ್ತದೆ ಇದಕ್ಕಿಂತ ಮುಖ್ಯವಾಗಿ ನರಕೋಶಗಳು ಉತ್ಪತ್ತಿಸುವ ವಿದ್ಯುತ್ತಿನ ಏರಿಳಿತಗಳ ರೂಪವನ್ನು ಕಿಂಚಿತ್ತೂ ವಿರೂಪಮಾಡದೆ ಇವು ಈ ಅಗಾಧ ಪ್ರಮಾಣದಲ್ಲಿ ವರ್ಧಿಸಬೇಕು. ಹೀಗೆ ವರ್ಧನಗೊಂಡ ಪ್ರವಾಹವನ್ನು ಪ್ರವಾಹಮಾಪಕದ (ಗ್ಯಾಲ್ವನೊಮೀಟರ್) 

ಒಂದರ ತುದಿಗಳಿಗೆ ಹರಿಸಿದರೆ ಆಗ ಮಾಪಕದ ಮುಳ್ಳು ಪ್ರವಾಹಕ್ಕನುಗುಣವಾಗಿ ಕಂಪಿಸುತ್ತದೆ. ಮುಳ್ಳಿನ ಬದಲು ಒಂದು ಲೇಖನಿಯನ್ನು ಪ್ರವಾಹಮಾಪಕಕ್ಕೆ ಜೋಡಿಸಿದರೆ ಮತ್ತು ಲೇಖನಿಯ ಕೆಳಗೆ ಒಂದು ಕಾಗದದ ಹಾಳೆಯನ್ನು ಸಮವೇಗದಲ್ಲಿ ಸರಿಯುವಂತೆ ಏರ್ಪಡಿಸಿದರೆ ಲೇಖನಿ ನರಕೋಶಗಳ ವಿದ್ಯುತ್ತಿನ ವೃದ್ಧಿಕ್ಷಯಗಳ ರೂಪವನ್ನು ಕಾಗದದ ಮೇಲೆ ಬರೆಯುತ್ತದೆ.

ಹೀಗೆ ಬರೆದ ರೇಖಾಚಿತ್ರ ಎರಡು ಬಿಲ್ಲೆಗಳ ಸಮೀಪದಲ್ಲಿರುವ ಮಿದುಳಿನ ಭಾಗಮಾತ್ರದ ವಿದ್ಯುತ್ಕ್ರಿಯಾಚಿತ್ರ. ಮಿದುಳಿನ ಇಲ್ಲ ಭಾಗಗಳ ವಿದ್ಯುತ್ಕ್ರಿಯಾಚಿತ್ರ ನಮಗೆ ಬೇಕಾದರೆ ತಲೆಯ ಮೇಲೆಲ್ಲ ನಾವು 20-30 ಬಿಲ್ಲೆಗಳ ಜಾಲವನ್ನು ರಚಿಸಿ ಅವುಗಳಲ್ಲೆ ರಡನ್ನು ಒಂದೊಂದು ವಿದ್ಯುದ್ವರ್ಧಕಕ್ಕೆ ಸೇರಿಸಿ ಆ ವಿದ್ಯುದ್ವರ್ಧಕಗಳೊಂದೊಂದಕ್ಕೂ ಬೇರೆ ಬೇರೆ ಲೇಖನಿಗಳನ್ನು ಜೋಡಿಸಬೇಕು. ಆಗ ಮಿದುಳಿನ ವಿವಿಧ ಭಾಗಗಳ ವಿದ್ಯುತ್ಕ್ರಿಯಾಚಿತ್ರಗಳನ್ನು ಲೇಖನಿಗಳು ಏಕಕಾಲದಲ್ಲಿಯೆ ಸರಿಯುತ್ತಿರುವ ಹಾಳೆಯ ಮೇಲೆ ಬರೆಯುತ್ತವೆ. ಇಂಥ ಯಂತ್ರವೇ 

ಮಿದುಳಿನ ವಿದ್ಯುಲ್ಲೇಖ-ಎಲೆಕ್ಟ್ರೊ ಎನ್ಸೆಫಲೋಗ್ರಾಫ್. ಈ ಯಂತ್ರ ಬರೆಯುವ ರೇಖಾಚಿತ್ರವ್ಯೂಹಕ್ಕೆ ಎಲೆಕ್ಟ್ರೊ ಎನ್ಸೆಫಲೋಗ್ರಾಂ ಅಂದರೆ ಮಿದುಳಿನವಿದ್ಯುಲ್ಲೇಖನ ಎಂದು ಹೆಸರು. ಈ ಎರಡು ಹೆಸರುಗಳೂ ನಾಲಗೆಯನ್ನು ತೊಡರಿಸುವಂಥವೇ ಆದ್ದರಿಂದ ಎರಡನ್ನೂ ಸಂಕ್ಷೇಪವಾಗಿ ಇಇಜಿ ಎಂಬ ಒಂದೇ ಸಂಕೇತ ನಾಮದಿಂದ ಕರೆಯುವುದು ರೂಢಿಯಾಗಿದೆ.
ಎಂಟು ನಾಲೆಗಳ ಇಇಜಿ ಅಥವಾ ಹನ್ನೆರಡು ಹದಿನಾರು ನಾಲೆಗಳ ಇಇಜಿಗಳು ಉಪಯೋಗದಲ್ಲಿದೆ. 

ಎಲೆಕ್ಟ್ರೊ ಎನ್ಸೆಫಲೊಗ್ರಫಿ ಚಿತ್ರಿಸುವ ರೇಖಾವ್ಯೂಹವನ್ನು ಸಹ ಸಂಕ್ಷೇಪವಾಗಿ ಇಇಜಿ ಎಂದೇ ಕರೆಯುವೆವು. ಕಣ್ಣುಮುಚ್ಚಿಕೊಂಡು ನಿಶ್ಚಿಂತನಾಗಿ ಮಲಗಿರುವ ಮನುಷ್ಯನೊಬ್ಬನ ತಲೆಯ ಹಿಂಭಾಗದಿಂದ ಹುಟ್ಟಿ ಬಂದ ಇಇಜಿಗಳು ಸಾಮಾನ್ಯವಾಗಿ ಸುಸ್ಪಷ್ಟಾಕಾರದ ತರಂಗಗಳ ರೂಪ ತಾಳುತ್ತವೆ. ಇವುಗಳ ಆವರ್ತಸಂಖ್ಯೆ ಸೆಕೆಂಡೊಂದಕ್ಕೆ 10ರ ಸುಮಾರಿನಲ್ಲಿರುತ್ತದೆ. ಕಣ್ಣುಮುಚ್ಚಿಕೊಂಡಿರುವ ಮನುಷ್ಯ ಕಣ್ಣುತೆರೆದಕೂಡಲೆ ಅಥವಾ ಮುಚ್ಚಿಕೊಂಡಿದ್ದರೂ ಲೆಕ್ಕಮಾಡಲು ತೊಡಗಿದರೆ ಇಲ್ಲವೇ ಯಾವ ವಿಷಯವಾಗಿಯಾಗಲಿ ಚಿಂತನೆ ಮಾಡತೊಡಗಿದರೆ ಈ ತರಂಗಗಳು ಮಾಯವಾಗಿ ಅವುಗಳ ಸ್ಥಾನದಲ್ಲಿ ಸೆಕೆಂಡಿಗೆ 20-25ರ ಅನಿರ್ದಿಷ್ಟಾಕಾರದ ಅಲೆಗಳು (b ತರಂಗಗಳು) ರೂಪುಗೊಳ್ಳುತ್ತವೆ. ತಲೆಯ ಹಿಂಭಾಗದಲ್ಲಿರುವುದು ನಮ್ಮ ಮಿದುಳಿನ ದೃಷ್ಟಿಕೇಂದ್ರ, ನಾವು ಕಣ್ಣು ಮುಚ್ಚಿಕೊಂಡು ಶಾಂತಚಿತ್ತರಾಗಿರುವಾಗ ದೃಷ್ಟಿಕೇಂದ್ರದ ನರಕೋಶಗಳು ನಮ್ಮ ಕಣ್ಣುಗಳು ನೋಡಬೇಕಾದದ್ದು ಏನನ್ನು ಎಂಬುದನ್ನು ಹುಡುಕುತ್ತ ಇರುತ್ತವೆ, ಹೀಗೆ ಹುಡುಕುವಾಗ ಸೆಕೆಂಡಿಗೆ ಹತ್ತು ತಾಳದ ಗೀತವನ್ನು (ಚಿ ರಿದಂ) ಹಾಡುತ್ತಿರುತ್ತವೆ. ಕಣ್ಣಿಗೆ ಯಾವುದಾದರೊಂದು ನೋಟ ಸಿಕ್ಕಿದ ಕೂಡಲೇ ಹುಡುಕುವುದು ನಿಂತುಹೋಗಿ ಮನಸ್ಸು ನೋಟದಲ್ಲಿ ನಿಲ್ಲುತ್ತದೆ; ಹತ್ತು ತಾಳದ ಗೀತ ಅಡಗಿ ಹೋಗುತ್ತದೆ. ಆದ್ದರಿಂದ ಈ ದಶತಾಳಗೀತವನ್ನು ದೃಷ್ಟ್ಯಾಕಾಂಕ್ಷೆಯಗೀತ ಎಂದು ಕರೆಯಬಹುದು.

ಆದರೆ ಕೆಲವರು ಕಣ್ಣುಮುಚ್ಚಿಕೊಂಡಿರಲಿ ತೆರೆದಿರಲಿ ಈ ದಶತಾಳಗೀತ ಅವರ ಇಇಜಿಯಲ್ಲಿ ರೂಪುಗೊಳ್ಳುವುದೇ ಇಲ್ಲ. ಇಂಥವರು ತಮ್ಮ ಮನಸ್ಸಿನಲ್ಲಿಯೇ ಯಾವಾಗಲೂ ಚಿತ್ರಗಳನ್ನು ಕಾಣುತ್ತಿರುತ್ತಾರೆ. ಇವರು ಯಾವ ಮಾತನ್ನು ಕೇಳಿದರೂ ಅದರ ಚಿತ್ರ ಅವರ ಕಣ್ಣ ಮುಂದೆ ನಿಂತಂತಿರುತ್ತದೆ. 

ಇದಕ್ಕೆ ಪ್ರತಿಯಾಗಿ ಮತ್ತೆ ಕೆಲವರ ದಶತಾಳಗೀತ ಅಳಿಸಿಹೋಗುವುದೇ ಇಲ್ಲ. ಕಣ್ಣ ತೆರೆದಿದ್ದಾಗ, ವಿಚಾರಪರವಾಗಿದ್ದಾಗ ಕೂಡ ಇವರ ನರಕೋಶಗಳು ಸೆಕೆಂಡಿಗೆ ಹತ್ತುತಾಳ ಹಾಕುತ್ತಲೇ ಇರುತ್ತವೆ. ಇವರ ದೃಷ್ಟ್ಯಾಕಾಂಕ್ಷೆಗೆ ವಿರಾಮವೇ ಇಲ್ಲ. 

ಕೆಲವರ ಗಂಡಸ್ಥಳದಿಂದ ಹುಟ್ಟಿಬಂದ ಇಇಜಿಯಲ್ಲಿ ಸೆಕೆಂಡಿಗೆ ಐದಾರರ ಸಂಖ್ಯೆಯ ತರಂಗಗಳು ಒಂದೊಂದು ಸಲ ಕಾಣಿಸಿಕೊಳ್ಳುತ್ತವೆ. ಇವರು ಭಾವೋದ್ರಿಕ್ತರಾದಾಗ, ಇವರಿಗೆ ಸಿಟ್ಟುಬಂದಾಗ ಈ ಐದು ತಾಳದ ಗೀತ (q ರಿದಂ) ಸಾಮಾನ್ಯವಾಗಿ ಹೊರಡುತ್ತದೆ. ಇವರು ಸಮಾಧಾನರಾದಾಗ ಈ ಗೀತ ಮಾಯವಾಗುತ್ತದೆ. ಆದ್ದರಿಂದ ಪಂಚತಾಳಗೀತ ಸುಖಾಕಾಂಕ್ಷೆಯ ಗೀತ. ಜಿತೇಂದ್ರಿಯನ ಗಂಡಸ್ಥಳ ಪಂಚತಾಳಗೀತವನ್ನು ಎಂದೆಂದೂ ಹಾಡುವುದಿಲ್ಲ. 

ಮತ್ತೆ ಕೆಲವರಲ್ಲಿ ಆಗಾಗ್ಗೆ ಸೆಕೆಂಡಿಗೆ ಮೂರರ ಸುಮಾರಿನ ಮಂದ್ರ ತರಂಗಗಳು ಕಾಣಿಸಿಕೊಳ್ಳುತ್ತವೆ. ಅಂಥವರು ಅಪಸ್ಮಾರ ರೋಗಿಗಳು; ಕಡೆಯ ಪಕ್ಷ ಸುಪ್ತ ಅಪಸ್ಮಾರ ರೋಗಿಗಳಾದರೂ ಆಗಿರುತ್ತಾರೆ. ಮೂರು ತಾಳದ ಗೀತ (ಜ ರಿದಂ) ನರಕೋಶಗಳ ಅವನತ 

ಸ್ಥಿತಿಯನ್ನೂ ಸೂಚಿಸುತ್ತದೆ. ಎರಡು ಮೂರು ವರ್ಷಗಳೊಳಗಿನ ಮಕ್ಕಳ ಮತ್ತು ಪುರ್ಣ ನಿದ್ರಾವಸ್ಥೆಯಲ್ಲಿರುವ ಆರೋಗ್ಯವಂತರ ಇಇಜಿಗಳಲ್ಲಿಯೂ ಮೂರರ ತರಂಗಗಳು ಕಾಣುತ್ತವೆ. ಒಟ್ಟಿನಲ್ಲಿ ತ್ರಿತಾಳಗೀತೆಯನ್ನು ಲಯಗೀತೆ ಎಂದು ಕರೆಯಬಹುದು. 

ಈ ವಿದ್ಯುದ್ರೂಪಗಳನ್ನು ದಶತಾಳಗೀತೆ, ಪಂಚತಾಳಗೀತೆ, ತ್ರಿತಾಳಗೀತೆ ಎಂದು ಕರೆದಿರುವುದು ಸಂಪುರ್ಣವಾಗಿ ಆಲಂಕಾರಿಕ ದೃಷ್ಟಿಯಿಂದಲ್ಲ. ಏಕೆಂದರೆ ಇಇಜಿಯ ವಿದ್ಯುದ್ವರ್ಧಕದಿಂದ ಹೊರಬಿದ್ದ ವಿದ್ಯುತ್ಪ್ರವಾಹವನ್ನು ಪ್ರವಾಹಮಾಪಕದಲ್ಲಿ ಹರಿಯಿಸುವುದರ ಬದಲು ಲೌಡ್ಸ್ಪೀಕರ್ ಅಥವಾ ಪ್ರಬಲವಾಚಿಯಲ್ಲಿ ಹರಿಯಿಸಿದರೆ ಗೀತಗಳು ನಮಗೆ ಹತ್ತು, ಐದು, ಮೂರು ತಾಳಗಳಾಗಿ ಅಸಂದಿಗ್ಧವಾಗಿ ಕೇಳಿಬರುತ್ತವೆ.

ಸಾಮಾನ್ಯಸ್ಥಿತಿಯಲ್ಲಿರುವಾಗ ಜನಗಳ ಇಇಜಿಗಳನ್ನು ಬರೆಸುವುದರ ಜೊತೆಗೆ ಅವರ ದೃಷ್ಟಿಕೇಂದ್ರಗಳನ್ನೋ ವಿಶೇಷವಾಗಿ ಉದ್ದೀಪನಗೊಳಿಸಿ ಇಇಜಿಗಳನ್ನು ಬರೆಸಿದರೆ ಅವರ ಆರೋಗ್ಯಸ್ಥಿತಿ ಮತ್ತಷ್ಟು ಸ್ಪಷ್ಟವಾಗಿ ಹೊರಬೀಳುತ್ತದೆ. ಬಹುಜನರ ಲೇಖನಗಳು ಹೀಗೆ ಉದ್ದೀಪನಗೊಂಡಾಗಲೂ ಏನೂ ಬದಲಾವಣೆಯನ್ನು ತೋರುವುದಿಲ್ಲ. ಆದರೆ ಕೆಲವರು ಎಲ್ಲ ವಿಧದಲ್ಲಿಯೂ ಆರೋಗ್ಯವಂತರಾಗಿಯೇ ಕಂಡರೂ ಅವರ ಕಣ್ಣಮೇಲೆ ಆವರ್ತವಾಗಿ ಬೆಳಕು, ನೆರಳು, ಬೆಳಕು, ನೆರಳುಗಳು ಒಂದು ಗೊತ್ತಾದ ತಾಳದಲ್ಲಿ _ ಸಾಮಾನ್ಯವಾಗಿ 

ದಶತಾಳದಲ್ಲಿ__ಬಿದ್ದಾಗ ಅವರ ಇಇಜಿ ಒಂದು ದೊಡ್ಡ ತಳಮಳವನ್ನೇ ಬಿರುಗಾಳಿಯನ್ನೆ ಚಿತ್ರಿಸುತ್ತದೆ. (ಚಿತ್ರ 3). ಇಂಥವರು ದ್ಯುತಿಜನಿತ ಅಪಸ್ಮಾರ ರೋಗಿಗಳು (ಫೋಟೊಜೆನಿಕ್ ಎಪಿಲೆಪ್ಟಿಕ್ಸ್‌). ಇವರು ದಟ್ಟವಾದ ಗಿಡಮರಗಳಿರುವ ರಸ್ತೆಯಲ್ಲಿ ವಾಹನಗಳಲ್ಲಿ ವೇಗವಾಗಿ ಹೋಗುತ್ತಿರುವಾಗಿ ಸೂರ್ಯನ ಬೆಳಕು ಮರಗಳ ಎಲೆಗಳ ಸಂದುಗಳಿಂದ ಆವರ್ತಕಾಂತಿ ಇವರ ನರಕೋಶಗಳ ತಾಳಗತಿಗೆ ಸಮವಾದರೆ, ಹಾಗೇ ಅದೇ ಆವರ್ತದಲ್ಲಿ ಬೆಳಕು ಕಣ್ಣಮೇಲೆ ಬೀಳುತ್ತಿರುವಷ್ಟು ಕಾಲವೊ ಇವರಿಗೆ ತಮ್ಮ ಇಂದ್ರಿಯಗಳ ಮೇಲಿರುವ ಹತೋಟಿ ತಪ್ಪಿಹೋಗುತ್ತದೆ. ಇವರು ಪ್ರಜ್ಞಾಹೀನರಾಗುತ್ತಾರೆ. ದ್ಯುತಿಜನಿತ ಅಪಸ್ಮಾರ ರೋಗಿಗಳು ಪ್ರಾಯಶಃ ನಮ್ಮ ಜನಸಂಖ್ಯೆಯಲ್ಲಿ ಇನ್ನೂರಕ್ಕೆ ಒಬ್ಬರಿಗಿಂತ ಕಡಿಮೆ ಇದ್ದಾರೆ. ಇದೇ ರೀತಿಯಲ್ಲಿ ಧ್ವನಿಜನಿತ ಅಪಸ್ಮಾರ ರೋಗಿಗಳೂ (ಆಡಿಯೊಜೆನಿಕ್ ಎಪಿಲೆಪ್ಟಿಕ್ಸ್‌) ಇರುವುದುಂಟು. 

ಇವರ ಸಂಖ್ಯೆ ಎಂಟುನೂರಕ್ಕೆ ಒಬ್ಬರಿಗಿಂತಲೂ ಕಡಿಮೆ ಇರಬೇಕು. ಹಾಗೆಯೇ ಕೆಲವು ಜಾತಿಯ ಶ್ರವಣ ಭ್ರಾಂತರ ಕಣ್ಣಮೇಲೆ ಆವರ್ತಕಾಂತಿ ಬಿದ್ದಾಗ ಅವರ ಇಇಜಿಗಳು ಒಂದು ವಿಚಿತ್ರ ರೀತಿಯಲ್ಲಿ ದ್ಯುತಿಸ್ಪಂದನಗಳನ್ನು ಅನುಸರಿಸುವಂತೆ ಈಚಿನ ಕೆಲವು ಅನ್ವೇಷಣೆಗಳಿಂದ ಕಂಡುಬಂದಿದೆ. ಮಂದಬುದ್ಧಿಗಳ ಮಿದುಳು ಹಾನಿಯಾಗಿರುವವರ ಇಇಜಿಗಳಲ್ಲಿ ಸುಮಾರು ಅರ್ಧ ಮಿನಿಟಿನ ಅವಧಿಯ ಲೇಖನ ನೋಡಿದರೆ ಸಾಕು, ಅವರ ಇಇಜಿಯ ವ್ಯಕ್ತಿ ವೈಶಿಷ್ಟ್ಯ ಪತ್ತೆಯಾಗುತ್ತದೆ. 

ಮುಖ್ಯವಾಗಿ ಇಇಜಿಯ ಲಿಪಿಗಳಲ್ಲಿ ಅಡಗಿರುವ ರಹಸ್ಯಗಳಲ್ಲಿ ನೂರರಲ್ಲೊಂದು ಭಾಗವನ್ನು ಕೂಡ ನಾವಿನ್ನು ಹೊರಗೆಡಹಿಲ್ಲವೆಂಬುದನ್ನು ಮರೆಯಬಾರದು. ಇದೇ ಅಭಿಪ್ರಾಯವನ್ನೆ ಇಂಗ್ಲೆಂಡಿನ ಸುಪ್ರಸಿದ್ಧ ಶರೀರವಿಜ್ಞಾನಿ, ಅದರಲ್ಲಿಯೂ ವಿಶೇಷವಾಗಿ ನರಶಾಸ್ತ್ರದಲ್ಲಿ ನಿಷ್ಣಾತನಾಗಿದ್ದ ಸರ್ ಚಾಲ್ರ್ಸ್‌ ಷೆರಿಂಗ್ಟನ್ ರೂಪಕದ ಸುಂದರ ಭಾಷೆಯಲ್ಲಿ ಹೀಗೆ ಹೇಳಿದ್ದಾನೆ_ ನಮ್ಮ ಮಿದುಳು ಒಂದು ಐಂದ್ರಜಾಲಿಕ ಮಗ್ಗದಂತೆ ಇದೆ; ಮಗ್ಗದಲ್ಲಿ ಥಳಥಳಿಸುವ ಲಾಳಿಗಳು ಕ್ಷಣಕ್ಷಣವೂ ಕರಗಿ ಅಳಿಸಿಹೋಗುತ್ತಿರುವ ಅದೆಷ್ಟೋ ಮಾದರಿ ನವುರುಬಟ್ಟೆಗಳನ್ನು ನೇಯುತ್ತಿವೆ; ಪ್ರತಿಯೊಂದು ಮಾದರಿಯೂ ಅರ್ಥಪುರ್ಣವಾಗಿದ್ದರೂ ಶಾಶ್ವತವಲ್ಲ. ಹೀಗೆ ಅರ್ಥಪುರ್ಣವಾಗಿದ್ದರೂ ನಮಗೆ ಅರ್ಥ ತೋರುತ್ತಿಲ್ಲದಿರುವ ಕೊರತೆಯನ್ನು ನೀಗಿಸುವುದಕ್ಕೆಂದೇ ಪ್ರಪಂಚದ ಹಲವಾರು ಸಂಸ್ಥೆಗಳು ಅನ್ವೇಷಣೆ ನಡೆಸುತ್ತಿವೆ. 

ಅವುಗಳಲ್ಲಿ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌)ಯೂ ಒಂದು.(ಆರ್.ಎಲ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ